ಮೂಕಾಂಬಿಕಾ ಕ್ರಿಯೇಶನ್ಸ್ ಲಾಂಛನದಲ್ಲಿ ನೂತನ ಸಿನಿಮಾವೊಂದು ಆರಂಭವಾಗುತ್ತಿದೆ. ಪ್ರೀತಮ್ ಗುಬ್ಬಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ, ಇನ್ನೂ ಹೆಸರಿಡದ ಈ ‘ಪ್ರೊಡಕ್ಷನ್ ನಂ.೧ ಚಿತ್ರ ಹಲವು ಬಗೆಯ ಹೊಸತನಗಳಿಂದ ಕೂಡಿದೆ.
ಕನ್ನಡ ಚಿತ್ರರಂಗದ ಮಹೋನ್ನತ ಸಂಗೀತ ನಿರ್ದೇಶಕ, ಗಾಯಕ ಜಿ.ಕೆ. ವೆಂಟೇಶ್. ಇಂಥ ಮೇರು ವ್ಯಕ್ತಿಯ ಕುಟುಂಬದ ಅನೇಕರು ಈಗಾಗಲೇ ಚಿತ್ರರಂಗದ ವಿವಿಧ ವಿಭಾಗಗಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇದೇ ಮೊಲ ಬಾರಿಗೆ ಜಿ.ಕೆ. ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಕನ್ನಡದ ಸಿನಿಮಾವೊಂದರ ಮೂಲಕ ನಾಯಕನಟನಾಗಿ ಹೊರಹೊಮ್ಮುತ್ತಿದ್ದಾರೆ. ಸದ್ಯ ಈ ಚಿತ್ರದ ಅದ್ಧೂರಿ ಫೋಟೊ ಶೂಟ್ ಕೂಡಾ ನಡೆದಿದೆ.
ಪ್ರೀತಾ ಜಯರಾಮ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ನಿರ್ದೇಶನ, ಹರ್ಷ ನೃತ್ಯ, ರವಿವರ್ಮ ಅವರ ಸಾಹಸ ಮತ್ತು ಹೊಸ್ಮನೆ ಮೂರ್ತಿ ಅವರ ಕಲಾನಿರ್ದೇಶನವಿರುವ ‘ಪ್ರೊಡಕ್ಷನ್ ನಂ.೧ ಚಿತ್ರ ಸೆಪ್ಟೆಂಬರ್ ೧೦ರಿಂದ ಶೂಟಿಂಗ್ ಆರಂಭಿಸಿ ಮೈಸೂರು ಮತ್ತು ಊಟಿಯ ರಮ್ಯ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಟಿಸಲು ಅಣಿಯಾಗಿರುವ ಪೃಥ್ವಿ ಈಗಾಗಲೇ ನಟನೆ, ನೃತ್ಯ, ಸಾಹಸ ಸೇರಿದಂತೆ ಸಿನಿಮಾಗೆ ಬೇಕಿರುವ ಹಲವು ಬಗೆಯ ತರಬೇತಿ ಪಡೆದು, ಪೂರ್ಣಪ್ರಮಾಣದ ತಯಾರಿ ನಡೆಸಿಬಂದಿದ್ದಾರೆ.
ಪೃಥ್ವಿಯ ಜೊತೆಗೆ ಮಾಳವಿಕ ಮೋಹನನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು ಮತ್ತು ಸಂಪತ್ ಸೇರಿದಂತೆ ಅನೇಕರ ತಾರಾಗಣವಿದೆ.